ಎಸ್.ಡಿ.ಎಂ ಅಂಗಳದಲ್ಲಿ ೭೭ನೇ ಗಣರಾಜ್ಯೋತ್ಸವ – ಉಜ್ವಲ ಭವಿಷ್ಯದ ಮಹತ್ವಾಕಾಂಕ್ಷಿ ಸಂಕಲ್ಪದ ಅನಾವರಣ

ಉಜಿರೆ, ಜ ೨೬: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯು ಉಜಿರೆಯ ಶ್ರೀ ಡಿ.ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ೭೭ನೇ ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮವು ಭಾರತದ ಶ್ರೇಷ್ಠ ಪರಂಪರೆಯ ಗಟ್ಟಿ ಅಡಿಪಾಯದ ಮೇಲೆ ವರ್ತಮಾನವನ್ನು ಸಮೃದ್ಧಗೊಳಿಸಿಕೊಂಡು ಉಜ್ವಲ ಭವಿಷ್ಯದ ಹಾದಿ ನಿಚ್ಛಳಗೊಳಿಸಿಕೊಳ್ಳುವ ಮಹತ್ವಾಕಾಂಕ್ಷಿ ಸಂಕಲ್ಪವನ್ನು ಎತ್ತಿಹಿಡಿಯಿತು. ಈ ಮೌಲಿಕ ಆಶಯ ಧ್ವನಿಸುವ ವಿದ್ಯಾರ್ಥಿಗಳ ಪ್ರತಿಭಾಪೂರ್ಣ ಕಲಾತ್ಮಕ ಅಭಿವ್ಯಕ್ತಿಯ ಪ್ರದರ್ಶನವು ಭಾರತದ ಆಡಳಿತಾತ್ಮಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹೆಜ್ಜೆಗಳು ಹೇಗಿರಬೇಕು ಎಂಬುದನ್ನು ದೃಢೀಕರಿಸಿದವು.
ಭಾರತೀಯ ನೌಕಾದಳದ ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಭರತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ ಕಾಲೇಜಿನ ಎನ್.ಸಿ.ಸಿ ವಿಭಾಗದ ಕೆಡೆಟ್ಸ್, ರೋವರ್ಸ್ ಆ್ಯಂಡ್ ರೇಂಜರ್ಸ್ ಪ್ರತಿನಿಧಿಗಳ ಪಥಸಂಚಲನ, ಶಿಸ್ತುಬದ್ಧ ನಡೆಯು ಗಮನ ಸೆಳೆಯಿತು. ಎನ್.ಸಿ.ಸಿ. ಅಧಿಕಾರಿ ಭಾನುಪ್ರಕಾಶ್ (ಆರ್ಮಿ) ಅವರ ಮಾರ್ಗದರ್ಶನದಲ್ಲಿ ಪಥಸಂಚಲನ ನಡೆಯಿತು. ತದನಂತರ ಎಸ್.ಡಿ.ಎಂ ಸಂಸ್ಥೆಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಅಭಿವ್ಯಕ್ತಿಯ ವಿವಿಧ ಮಾದರಿಗಳು ವೈವಿಧ್ಯಮಯ ಇತಿಹಾಸವನ್ನು ಸಮಗ್ರವಾಗಿ ತಿಳಿದುಕೊಂಡು ಹೊಸ ಕಾಲದ ಸ್ಪರ್ಧಾತ್ಮಕತೆರೂಢಿಸಿಕೊಳ್ಳುವ ಉತ್ಸಾಹವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು.
ಆರಂಭದಲ್ಲಿ ಎಸ್.ಡಿ.ಎಂ ಶಾಲೆಯ ಚಿಣ್ಣರು ಅನಾವರಣಗೊಳಿಸಿದ ಪ್ಯಾರಾಚ್ಯೂಟ್ ಜೊತೆಗಿನ ಸಂವಾದಿ ಅಭಿನಯ ಭಾರತದ ಭವಿಷ್ಯದ ದಿಗ್ವಿಜಯದ ಮುನ್ನಡೆಯ ಹುಮ್ಮಸ್ಸನ್ನು ಸಂಕೇತಿಸಿತು. ಅವರ ನೃತ್ಯಸಂವಾದದ ಅಭಿವ್ಯಕ್ತಿಯ ಹಿನ್ನೆಲೆಯಾಗಿ ಕೇಳಿಬಂದ ಜನಜನಿತ ‘ಸ್ಲಂ ಡಾಗ್ ಮಿಲಿನಿಯೇರ್’ ಸಿನಿಮಾದ ‘ಜೈ ಹೋ’ ಹಾಡು ಹೊಸ ತಲೆಮಾರಿನ ಎಳೆಯ ಮನಸುಗಳ ಆತ್ಮವಿಶ್ವಾಸದ ಜೋಷ್‌ಅನ್ನು ಆಕರ್ಷಣೀಯವಾಗಿ ಅನಾವರಣಗೊಳಿಸಿತು.
ಭಾರತವನ್ನು ಅನ್ಯರ ಹಿಡಿತದಿಂದ ವಿಮುಕ್ತಗೊಳಿಸುವ ಕ್ರಾಂತಿಕಾರಕ ಹೋರಾಟಗಳಲ್ಲಿ ಭಾಗಿಯಾಗಿದ್ದ ಮಹಿಳಾ ಹೋರಾಟಗಾರರಾಗಿದ್ದ ರಜಿಯಾ ಸುಲ್ತಾನಾ, ರುದ್ರಮಾದೇವಿ, ರಾಣಿ ಪದ್ಮಿನಿ, ರಾಣಿ ಅಬ್ಬಕ್ಕ, ಚೆನ್ನ ಬೈರಾದೇವಿ, ಬೆಳವಡಿ ಮಲ್ಲಮ್ಮ, ತಾರಾಬಾಯಿ, ಅಹಲ್ಯಾಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಭೀಮಾಬಾಯಿ ಮತ್ತು ಝಾನ್ಸಿರಾಣಿ ಲಕ್ಷಿö್ಮÃಬಾಯಿ ಕುರಿತ ವೀರೋಚಿತ ಇತಿಹಾಸದ ವಿವರಗಳು ವಿದ್ಯಾರ್ಥಿನಿಯರ ಕಲಾತ್ಮಕ ಅಭಿನಯದ ಮೂಲಕ ದೇಶದ ಬಗೆಗಿನ ಹೆಮ್ಮೆ ಮತ್ತು ಅಭಿಮಾನ ಹೆಚ್ಚಿಸಿದವು. ಹಿಂದಿನ ಕಾಲದ ಬದುಕಿನ ವೈಶಿಷ್ಟö್ಯತೆಯನ್ನು ಕಾಣಿಸಿ ಸದ್ಯದ ವೈರುಧ್ಯಗಳನ್ನು ಅನಾವರಣಗೊಳಿಸಿದ ವಿದ್ಯಾರ್ಥಿಗಳ ಅಭಿನಯ ಸಾಮರ್ಥ್ಯ ವಿಭಿನ್ನವಾಗಿತ್ತು. ಹಿನ್ನೆಲೆಯಲ್ಲಿ ‘ಮಾಲ್ಗುಡಿ ಡೇಸ್’ ಧಾರಾವಹಿಯ ಶೀರ್ಷಿಕೆ ಗೀತೆಯ ಸಂಗೀತ ನಿನಾದ ಹಳೆಯ ಕಾಲ ಮತ್ತು ಹೊಸ ಕಾಲದ ಅರ್ಥಪೂರ್ಣ ಸಂಯೋಜನೆಯ ದ್ಯೋತಕವಾಗಿ ಮನಸೂರೆಗೊಂಡಿತು.
ನ್ಯಾಚುರೋಪತಿ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಲಾಭಿವ್ಯಕ್ತಿಯು ನಿಸರ್ಗಸಹಜವಾದ ಪ್ರಾಕೃತಿಕ ಚಿಕಿತ್ಸೆಯ ವಿಧಾನಗಳ ಅನುಸರಣೆಯೊಂದೇ ಮನುಷ್ಯ ಬದುಕನ್ನು ಪುನರುಜ್ಜೀವನಗೊಳಿಸಬಲ್ಲದು ಎಂಬ ಸಂದೇಶವನ್ನು ಸಾರಿತು. ಶಿವ ಪಾರ್ವತಿ ನಡುವಿನ ಇಂಗ್ಲಿಷ್ ಸಂಭಾಷಣೆಯ ಮೂಲಕ ಶುರುವಾದ ಈ ಕಲಾತ್ಮಕ ಪ್ರದರ್ಶನವು ಋಷಿಮುನಿಗಳೂ ಸೇರಿದಂತೆ ವಿವಿಧ ಪ್ರಾಜ್ಞರು ಕೊಡಮಾಡಿದ ನಿಸರ್ಗಸ್ನೇಹಿ ಚಿಕಿತ್ಸಾ ಜ್ಞಾನ ಹಿಂದಿನ ಕಾಲದಿಂದ ಸದ್ಯದ ಆಧುನಿಕ ಕಾಲದವರೆಗೆ ದಾಟಿಕೊಂಡ ಬಗೆಯನ್ನು ಆಪ್ತವಾಗಿ ಚಿತ್ರಿಸಿತು. ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪ್ರಕೃತಿಯಲ್ಲಿಯೇ ಅಡಗಿದೆ ಎನ್ನುವ ಮೌಲಿಕ ಚಿಂತನೆಯನ್ನು ಧ್ವನಿಸಿತು.
ವಿವಿಧ ಕ್ಷೇತ್ರಗಳ ಗಣ್ಯರು ತಮ್ಮ ಸಾಧನೆಯ ಹೆಜ್ಜೆಗಳ ಮೂಲಕ ಅಭಿವೃದ್ಧಿಯ ಸಾಧ್ಯತೆಗಳನ್ನು ಕಂಡರಿಸುವ ಹೊಸ ಮಾದರಿಗಳನ್ನು ಕಾಣಿಸುತ್ತಾ ಹೇಗೆ ತಲೆಮಾರುಗಳನ್ನು ಪ್ರಭಾವಿಸಿದರು ಎಂಬ ಅಂಶವನ್ನು ಎತ್ತಿಹಿಡಿಯುವ ವಿದ್ಯಾರ್ಥಿ ತಂಡದ ಮತ್ತೊಂದು ಪ್ರದರ್ಶನ ಆಕರ್ಷಣೀಯವಾಗಿತ್ತು. ಭಾರತದ ಜಾನಪದ ವೈಭವ, ಕೇರಳ ಸಂಸ್ಕೃತಿಯ ವಿಶೇಷತೆ, ಆಪರೇಷನ್ ಸಿಂಧೂರದ ವಿವರ, ವಂದೇ ಮಾತರಂ ಗೀತೆಯ ಜೊತೆಗಿನ ಸತ್ವಯುತ ಮೌಲ್ಯ, ವಿಜ್ಞಾನ ಮತ್ತು ತಂತ್ರಜ್ಞಾನದ ನಿಖರ ಸಾಧನೆಯ ವಿವರಗಳನ್ನು ವಿವಿಧ ಪ್ರದರ್ಶನಗಳು ಬಿಂಬಿಸಿದವು.
ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿವರ್ಗ, ಕ್ರೀಡಾವಿಭಾಗ ಹಾಗೂ ಊರಿನ ನಾಗರಿಕರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆಯ ವಿವರಗಳನ್ನು ಪ್ರಸ್ತುಪಡಿಸಲಾಯಿತು.